Tuesday, October 18, 2011

ಸಂದರ್ಶನ

Posted by Supreeth.K.S | Tuesday, October 18, 2011 | Category: |


ಕರ್ನಾಟಕ ಸರ್ಕಾರದ ಕರ್ನಾಟಕ ಜ್ಞಾನ ಆಯೋಗ ರೂಪಿಸಿರುವ "ಕಣಜ" ಅಂತರಜಾಲ ಕನ್ನಡ ಜ್ಞಾನಕೋಶ. ನಮ್ಮ ಜನಪ್ರಿಯ ಮಾಧ್ಯಮಗಳಲ್ಲಿ ಹಾಗೂ ಚರ್ಚೆಗಳಲ್ಲಿ ಇದನ್ನು ಕನ್ನಡ ವಿಕಿಪೀಡಿಯ ಎಂದು ಕರೆಯಲಾಗುತ್ತದೆ. ಕನ್ನಡ ವಿಕಿಪೀಡಿಯ ಹಾಗೂ ಕಣಜ ಎರಡೂ ಒಂದೇ ಯೋಜನೆ ಎನ್ನುವ ತಪ್ಪು ಅಭಿಪ್ರಾಯ ಸಾಮಾನ್ಯರಲ್ಲಿ ಮಾತ್ರವಲ್ಲ ಮಾಧ್ಯಮಗಳಲ್ಲಿ ಕೆಲಸ ಮಾಡುವ ಹಲವರಲ್ಲಿ ಇದೆ.

ಕಣಜ ಜಾಲತಾಣದ ಉದ್ದೇಶ "ವಿವಿಧ ಸಂಸ್ಥೆ ಮತ್ತು ವ್ಯಕ್ತಿಗಳಿಂದ ಮಾಹಿತಿಗಳನ್ನು ಪಡೆದು ಅವುಗಳನ್ನು ಸಾರ್ವಜನಿಕ ಬಳಕೆಗಾಗಿ ಕನ್ನಡ ಭಾಷೆಯಲ್ಲಿ, ವಿದ್ಯುನ್ಮಾನ ರೂಪದಲ್ಲಿ, ವಿಶ್ವವ್ಯಾಪಿ ಜಾಲತಾಣದಲ್ಲಿ(www.kanaja.in) ಪ್ರಕಟಿಸುವುದು." ಇದು ಹಿಂದೆ ಮುದ್ರಿತ ವಿಶ್ವಕೋಶಗಳನ್ನು ಸಿದ್ಧ ಪಡಿಸುತ್ತಿದ್ದ ಕಾರ್ಯವಿಧಾನವನ್ನು ಅಳವಡಿಸಿಕೊಂಡಿದೆ. ಹೇಗೆಂದರೆ, ಕಣಜ ಒಂದು ಸಂಪಾದನೆ ಹಾಗೂ ಸಲಹಾ ಮಂಡಳಿಯನ್ನು ಹೊಂದಿರುತ್ತದೆ. ಕಣಜಕ್ಕೆ ಸೇರಿಸಬೇಕಾದ ಮಾಹಿತಿಯ ಮೇಲಿನ ನಿಯಂತ್ರಣ ಇವರ ಕೈಯಲ್ಲಿ ಇರುತ್ತದೆ. ಯಾವ ವಿಷಯಗಳ ಕುರಿತು ಮಾಹಿತಿ ಸೇರಿಸಲ್ಪಡಬೇಕು ಎನ್ನುವುದು ಸಂಪಾದಕೀಯ ಮಂಡಳಿಯ ಪರಾಮರ್ಶೆಗೆ ಬಿಟ್ಟ ವಿಚಾರವಾಗಿರುತ್ತದೆ. ನಾನಾ ಜ್ಞಾನ ಶಾಖೆಗಳಿಗೆ ಸಂಬಂಧಿಸಿದಂತೆ ತಜ್ಞರಿಂದ ಲೇಖನಗಳನ್ನು ಬರೆಸಿ ಪ್ರಕಟಿಸುವ, ಈಗಾಗಲೇ ಮುದ್ರಿತವಾಗಿರುವ ಪಠ್ಯವನ್ನು ಲೇಖಕರ, ಪ್ರಕಾಶಕರ ಅನುಮತಿಯೊಂದಿಗೆ ಅಂತರಜಾಲದಲ್ಲಿ ಪ್ರಕಟಿಸುವ, ಸಂಗ್ರಹಿಸಿದ ಮಾಹಿತಿಯನ್ನು ಪರಿಷ್ಕರಿಸುವ, ಸೇರಿಸಿರುವ ಮಾಹಿತಿಯನ್ನು ಸಮಕಾಲೀನ ಗೊಳಿಸುವ ಕಾರ್ಯವಿಧಾನವನ್ನು ಅನುಸರಿಸುತ್ತದೆ. ಟೆಕ್ಸ್ಟ್ ಜೊತೆಗೆ ಫೋಟೊ, ಧ್ವನಿ ಮುದ್ರಣಗಳು ಹಾಗೂ ಚಲನಚಿತ್ರಗಳನ್ನು ಸೇರಿಸುವ ಯೋಜನೆ ಕಣಜ ತಾಣದ್ದು.

ಕನ್ನಡ ವಿಕಿಪೀಡಿಯ ತೀರ ಭಿನ್ನವಾದ ಕಾರ್ಯವಿಧಾನವನ್ನು ಅನುಸರಿಸುತ್ತದೆ. ವಿಕಿಮೀಡಿಯ ಎನ್ನುವ ಸಾರ್ವಜನಿಕ ದೇಣಿಗೆಯನ್ನು ಅವಲಂಬಿಸಿರುವ ಅಮೇರಿಕಾದ ಲಾಭರಹಿತ ಸಂಸ್ಥೆಯ ಹಲವು ಯೋಜನೆಗಳಲ್ಲಿ ವಿಕಿಪೀಡಿಯಾ ಸಹ ಒಂದು. 'ವಿಕಿ' ಎಂಬ ತಂತ್ರಾಂಶವನ್ನು ಬಳಸಿ ರೂಪಿಸಲಾದ ವಿಕಿಪೀಡಿಯ ಜಗತ್ತಿನ ನಾನಾ ಭಾಷೆಗಳಿಗೆ ಪ್ರತ್ಯೇಕವಾದ ವಿಕಿಪೀಡಿಯ ಎಂದು ಕರೆಯಲ್ಪಡುವ ವಿಶ್ವಕೋಶಗಳನ್ನು ಹೊಂದಿದೆ. ಮಾಹಿತಿ ಸಂಗ್ರಹಣೆ ಹಾಗೂ ಪ್ರಸರಣಕ್ಕೆ ಆವಶ್ಯಕವಾದ ತಾಂತ್ರಿಕ 'ವೇದಿಕೆ'ಯನ್ನು ನಿರ್ಮಿಸಿಕೊಡುವುದಷ್ಟೇ ವಿಕಿಮೀಡಿಯ ಸಂಸ್ಥೆಯ ತಂತ್ರಜ್ಞರ ಜವಾಬ್ದಾರಿ. ವಿಕಿಪೀಡಿಯಾಗೆ ಪುಟಗಳನ್ನು ಸೇರಿಸುವ, ಮಾಹಿತಿಯನ್ನು ಸೇರಿಸುವ, ಪರಿಷ್ಕರಿಸುವ, ಸಮಕಾಲೀನಗೊಳಿಸುವ, ಚಿತ್ರಗಳನ್ನು ಸೇರಿಸುವ ಕೆಲಸವನ್ನೆಲ್ಲ ಅಂತರಜಾಲ ಸಂಪರ್ಕವಿರುವ ಯಾವ ವ್ಯಕ್ತಿಯಾದರೂ ಮಾಡಬಹುದು. ಒಂದು ರೀತಿಯಲ್ಲಿ ವಿಶ್ವಕೋಶದ ಬಳಕೆದಾರನೇ ವಿಶ್ವಕೋಶವನ್ನು ಕಟ್ಟಲು ಸಹಭಾಗಿಯಾಗುವ ಕಾರ್ಯವಿಧಾನ ವಿಕಿಪೀಡಿಯಾದ್ದು. ಕನ್ನಡದಲ್ಲಿರುವ ಮಾಹಿತಿ, ಕನ್ನಡಕ್ಕೆ ಬೇಕಾದ ಮಾಹಿತಿ, ಕನ್ನಡಿಗರಿಗೆ ತಿಳಿದಿರುವ ಮಾಹಿತಿಯನ್ನು ಕನ್ನಡ ಬಲ್ಲ ಯಾವ ಒಬ್ಬ ವ್ಯಕ್ತಿಯಾದರೂ ವಿಶ್ವ ವ್ಯಾಪಿಯಾಗಿ ಲಭ್ಯವಾಗುವಂತೆ ಮಾಡಬಲ್ಲ ಸವಲತ್ತು ನೀಡುವುದು ವಿಕಿಪೀಡಿಯಾದ ಹೆಗ್ಗಳಿಕೆ. ವಿಕಿಪೀಡಿಯದ ಮಾತೃ ಸಂಸ್ಥೆಯಾದ ವಿಕಿಮೀಡಿಯ ಪ್ರತಿಷ್ಠಾನ  ಫೋಟೊ, ಧ್ವನಿ ಮುದ್ರಿಕೆ, ಚಲನ ಚಿತ್ರಗಳನ್ನು ಸಂಗ್ರಹಿಸುವ ವ್ಯವಸ್ಥೆಯನ್ನೂ ಹೊಂದಿದೆ.

ಕಾರ್ಯವಿಧಾನದ ಚಿತ್ರಣ ಪಡೆದ ನಂತರ ಮಾಹಿತಿ ಸಂಗ್ರಹಣೆ ಹಾಗೂ ಪರಿಷ್ಕರಣೆಯ ಕುರಿತು ತುಸು ವಿವರವಾಗಿ ತಿಳಿಯೋಣ. ಉದಾಹರಣೆಯ ಮೂಲಕ ಈ ಪ್ರಕ್ರಿಯೆಯನ್ನು ವಿವರಿಸಲು ಬಯಸುವೆ. ಈ ವರ್ಷದ ಜ್ಞಾನ ಪೀಠ ಪ್ರಶಸ್ತಿ ಪಡೆದ ಕವಿ ಚಂದ್ರಶೇಖರ ಕಂಬಾರರ ಕುರಿತು ಮಾಹಿತಿ ಬೇಕು ಎಂದಿಟ್ಟುಕೊಳ್ಳಿ. ಕಣಜದಲ್ಲಿ ಹುಡುಕಿ. ವಿಕಿಪೀಡಿಯದಲ್ಲಿ ಹುಡುಕಿ. ಕಣಜ ಈಗಾಗಲೇ ಸೇರಿಸಲಾಗಿರುವ ಲೇಖನಗಳಲ್ಲಿ ಚಂದ್ರಶೇಖರ ಕಂಬಾರ ಎನ್ನುವ ಹೆಸರು ಇರುವ ಲೇಖನಗಳನ್ನು ಪಟ್ಟಿ ಮಾಡಿಕೊಡುತ್ತದೆ. ಈಗಿನಂತೆ ಕಂಬಾರರ ಪರಿಚಯವಿರುವ ಲೇಖನ ಲಭ್ಯವಿಲ್ಲ. ಅವರ ಕುರಿತು ನಿಮ್ಮಲ್ಲಿ ಮಾಹಿತಿ ಇದೆಯೆಂದಾದರೆ ಅದನ್ನು ನೇರವಾಗಿ ಪ್ರಕಟಿಸಲಿಕ್ಕೆ ಸಾಧ್ಯವಿಲ್ಲ. ನಿಮ್ಮ ಬರಹವನ್ನು ಸಂಪಾದಕೀಯ ಮಂಡಳಿಗೆ ಕಳುಹಿಸಿಕೊಡಬೇಕು. ಅಲ್ಲಿ ಪರಿಷ್ಕರಣೆಗೊಂಡ ನಂತರ ಕಣಜದಲ್ಲಿ ಪ್ರಕಟವಾಗುವುದು. ಮಾಹಿತಿ ಪರಿಷ್ಕರಣೆ ನೀತಿಗಳು ಹೇಗಿವೆ ಎನ್ನುವುದು ಸ್ಪಷ್ಟವಿಲ್ಲ. ಈಗಿನಂತೆ ಪ್ರತಿ ಲೇಖನದ ಜೊತೆಗೆ ಲೇಖಕರ ಹೆಸರನ್ನು ಪ್ರಕಟಿಸಲಾಗುತ್ತಿದೆ. ಅಂದರೆ ಕಂಬಾರರ ಕುರಿತು ನಾಲ್ಕೈದು ಲೇಖಕರಿಂದ ಲೇಖನಗಳು ಬಂದರೆ ಅದರಲ್ಲಿ ಆಯ್ಕೆ ಹೇಗೆ ನಡೆಯುತ್ತದೆ? ಹೆಚ್ಚು ಮಾಹಿತಿಯಿರುವ ಲೇಖನವನ್ನು ಪರಿಷ್ಕರಣೆ ಮಾಡಿ ಒಬ್ಬ ಲೇಖಕನ ಹೆಸರಿನಲ್ಲಿ ಪ್ರಕಟಿಸಲಾಗುತ್ತದೆಯೇ? ಹಾಗಾದರೆ ಉಳಿದ ಲೇಖಕರ ಕೊಡುಗೆ ವ್ಯರ್ಥವಾಗುವುದಿಲ್ಲವೇ? ಸ್ಪಷ್ಟವಿಲ್ಲ.  ಪಟ್ಟಿ ಮಾಡಲ್ಪಟ್ಟ ಲೇಖನಗಳೂ ಸಹ ಪುಸ್ತಕ, ಪತ್ರಿಕೆಯ ರೀತಿ ಮುದ್ರಿತ ಮಾಹಿತಿಯ ಶೈಲಿಯಲ್ಲಿರುತ್ತವೆ. ಅಂತರಜಾಲದ ಬಹುಮುಖ್ಯ ಸವಲತ್ತಾದ hyperlink ಬಳಕೆ ಇಲ್ಲ. ಅಂದರೆ ಸೇರಿಸಲ್ಪಟ್ಟ ಲೇಖನದಲ್ಲಿ ಉಲ್ಲೇಖಿಸಿದ ಪದ, ವ್ಯಕ್ತಿ, ಸ್ಥಳ, ಘಟನೆ ಕುರಿತು ಕಣಜದಲ್ಲೇ ಇರಬಹುದಾದ ಮಾಹಿತಿಗೆ ಕರೆದೊಯ್ಯುವ ಲಿಂಕುಗಳು ಇಲ್ಲ.

ವಿಕಿಪೀಡಿಯದಲ್ಲಿ ಚಂದ್ರಶೇಖರ ಕಂಬಾರ ಎನ್ನುವ ಹೆಸರಿನಲ್ಲಿಯೇ ಪ್ರತ್ಯೇಕವಾದ ಪುಟವಿದೆ. ಒಂದು ವೇಳೆ ಈ ಪುಟ ಲಭ್ಯವಿಲ್ಲದಿದ್ದರೆ ನೇರವಾಗಿ ಹೊಸ ಪುಟವನ್ನು ತೆರೆಯಬಹುದು. ಸಂಪಾದಕೀಯ ತಂಡದ ಹಸ್ತಕ್ಷೇಪವಿಲ್ಲದೆ ಮಾಹಿತಿಯನ್ನು ನೇರವಾಗಿ ಸೇರಿಸಬಹುದು. ವಿಕಿಪೀಡಿಯದಲ್ಲಿ ಸೇರಿಸಿದ ಮಾಹಿತಿಯು Creative Commons ಲೈಸೆನ್ಸಿನಡಿಯಲ್ಲಿ ಪ್ರಕಟವಾಗುತ್ತದೆ. ಹೀಗೆ ಪ್ರಕಟಿಸಿದ ಮಾಹಿತಿಯ ಹಕ್ಕು ಒಬ್ಬ ವ್ಯಕ್ತಿಯದಾಗಿರುವುದಿಲ್ಲ. ಹಾಗೆಂದರೆ ಹಕ್ಕು ಸ್ವಾಮ್ಯ ವಿಕಿಮೀಡಿಯ ಸಂಸ್ಥೆಯದೂ ಆಗಿರುವುದಿಲ್ಲ.ಕ್ರಿಯೇಟೀವ್ ಕಾಮನ್ಸ್ ಲೈಸೆನ್ಸಿನಡಿಯಲ್ಲಿ ಬಿಡುಗಡೆಯಾದ ಮಾಹಿತಿ, ಫೋಟೋ, ಧ್ವನಿ ಮುದ್ರಣ, ಚಲನಚಿತ್ರ  ಪ್ರಸರಣಕ್ಕೆ, ಪುನರ್ ಬಳಕೆಗೆ ಮುಕ್ತತೆಯನ್ನು ಕಲ್ಪಿಸಿಕೊಡುತ್ತದೆ. ಮೂಲ ಕೃತಿಯನ್ನು  ಬದಲಿಸದೆ ಎಷ್ಟು ಮಂದಿಗಾದರೂ ಹಂಚುವ, ಎಷ್ಟು ಬಾರಿಯಾದರೂ ಮರುಬಳಕೆ ಮಾಡುವ ಸ್ವಾತಂತ್ರ್ಯವನ್ನು ಕ್ರಿಯೇಟಿವ್ ಕಾಮನ್ಸ್ ಲೈಸೆನ್ಸ್ ಒದಗಿಸಿಕೊಡುತ್ತದೆ.  ಒಬ್ಬ ವ್ಯಕ್ತಿ ಸೇರಿಸಿದ ಮಾಹಿತಿಯನ್ನು ಉಳಿದವರು ಪರಿಷ್ಕರಿಸಬಹುದು, ಸೇರ್ಪಡೆಯಾಗಿರದ ಹೆಚ್ಚುವರಿ ಮಾಹಿತಿಯನ್ನು ಸೇರಿಸಿ ಲೇಖನವನ್ನು ಸಮೃದ್ಧಗೊಳಿಸಬಹುದು. ವಿಕಿಪೀಡಿಯದಲ್ಲಿ ಪ್ರತಿಯೊಂದು ಬದಲಾವಣೆಯೂ ಸಹ ಹಿಸ್ಟರಿ (ಇತಿಹಾಸ ಪುಟ)ಯಲ್ಲಿ ದಾಖಲಾಗುತ್ತಿರುತ್ತದೆ. ಕೈಗೊಂಡ ಬದಲಾವಣೆ ಹಾಗೂ ಬದಲಾಯಿಸಿದ ವ್ಯಕ್ತಿಯ ವಿವರ ದಾಖಲಾಗುತ್ತಿರುತ್ತದೆ. ಸೇರಿಸಿದ ಮಾಹಿತಿಗೆ ಮೂಲ/ಆಕರಗಳನ್ನು ಪ್ರಕಟಿಸಲು ವಿಕಿಪೀಡಿಯ ವಿನಂತಿಸುತ್ತದೆ. ಪರೀಕ್ಷಿಸಿ   ನೋಡಬಹುದಾದ ಆಕರಗಳಿರದ ಮಾಹಿತಿ ಪ್ರಾಶಸ್ತ್ಯವನ್ನು ಹೊಂದಿರುವುದಿಲ್ಲ. ಪರಿಷ್ಕರಣೆ, ಸಂಪಾದನೆ, ದುರ್ಬಳಕೆಯ ಹತೋಟಿ, ನಿಯಂತ್ರಣ , ಗೊಂದಲ ನಿವಾರಣೆಗೆ ಚರ್ಚೆ ಎಲ್ಲವೂ  ಕನ್ನಡ ಬಲ್ಲ ಸಮಸ್ತ ಕನ್ನಡಿಗರ ಸಮುದಾಯದ ಭಾಗವಹಿಸುವಿಕೆಯಲ್ಲಿ ನಡೆಯುತ್ತದೆ. ವಿಕಿಪೀಡಿಯಾದ  ಒಂದು ಲೇಖನದಲ್ಲಿ ಬಳಸಿರುವ ಪದಗಳು, ವ್ಯಕ್ತಿಗಳು, ಸ್ಥಳ, ಘಟನೆಗಳ ಕುರಿತು ವಿಕಿಪೀಡಿಯದಲ್ಲಿ ಈಗಾಗಲೇ ಮಾಹಿತಿ ಲಭ್ಯವಿದ್ದರೆ ಆ ಪದಗಳು ಅವುಗಳ ಪುಟಗಳಿಗೆ ಕರೆದೊಯ್ಯುವಂತೆ ಲಿಂಕ್ ನೀಡಬಹುದು. ಇದು ವಿಕಿ ತಂತ್ರಾಂಶದ ವೈಶಿಷ್ಟ್ಯ. ಒಂದು ಪುಟದಲ್ಲಿ ಹಲವಾರು ಪದಗಳಿಗೆ ಲಿಂಕುಗಳಿರುತ್ತವೆ. ಅವುಗಳಲ್ಲಿ ಒಂದನ್ನು ತೆರೆದರೆ ಆ ಪುಟವೂ ಮತ್ತಷ್ಟು ಲಿಂಕುಗಳನ್ನು ಹೊಂದಿರುತ್ತದೆ.  ಅಂದರೆ ಒಂದು ಪುಟದಲ್ಲಿ ಬಳಸಿದ ಪದಗಳು ಆ ಪದದ ಹಿಂದಿರುವ ಸಮಸ್ತ ಮಾಹಿತಿಗೂ ಬಾಗಿಲು ಇದ್ದಂತೆ. ಉದಾಹರಣೆಗೆ ಕಂಬಾರರ ಪುಟದಲ್ಲಿ ಜ್ಞಾನಪೀಠ ಪ್ರಶಸ್ತಿ ಎಂದಿರುವುದನ್ನು ಕ್ಲಿಕ್ ಮಾಡಿದರೆ ನಿಮಗೆ ಜ್ಞಾನಪೀಠ ಪ್ರಶಸ್ತಿಯ ಕುರಿತು ಮಾಹಿತಿಯಿರುವ ವಿಕಿಪೀಡಿಯಾದ ಪುಟ ತೆರೆಯುತ್ತದೆ. ಅದರಲ್ಲಿ ಇದುವರೆಗೆ ಜ್ಞಾನಪೀಠ ಪಡೆದಿರುವ ಎಲ್ಲಾ ಸಾಹಿತಿಗಳ ಹೆಸರು ಸಿಕ್ಕುತ್ತದೆ. ಅದರಲ್ಲಿ ಕುವೆಂಪು ಪದವನ್ನು ತೆರೆದರೆ ಅವರ ಪರಿಚಯ ದೊರೆಯುತ್ತದೆ. ಆ ಪುಟದಲ್ಲಿ ಅವರು ಕೆಲಸ ಮಾಡುತ್ತಿದ್ದ  ಮೈಸೂರು ವಿಶ್ವವಿದ್ಯಾಲಯ ಕುರಿತ ಮಾಹಿತಿ ಇರುವ ಲಿಂಕು ದೊರೆಯುತ್ತದೆ... ಹೀಗೆ.

ಕಣಜದಲ್ಲಿ ಸೇರಿಸಲಾಗುವ ಫೋಟೊಗಳ ಹಕ್ಕು ಆಯಾ ಕೃತಿಕಾರರದ್ದೇ ಆಗಿರುತ್ತದೆ. ಅದನ್ನು ಮರುಬಳಕೆ ಮಾಡುವುದಕ್ಕೆ  ಕೃತಿಕಾರರ ವೈಯಕ್ತಿಕ ಅನುಮತಿಯನ್ನು ಪಡೆಯಬೇಕು. ಕಣಜದಲ್ಲಿನ  ಮಾಹಿತಿ ಬಳಕೆಯ ಕುರಿತು ಅದರ ತಾಣದಲ್ಲಿ ನೀಡಿರುವ ಮಾಹಿತಿ ಹೀಗಿದೆ: "ಕಣಜದಲ್ಲಿರುವ ಮಾಹಿತಿಗಳು ಕೃತಿಸ್ವಾಮ್ಯ (ಕಾಪಿರೈಟ್) ಕಾಯ್ದೆಯ (ಕಾಪಿರೈಟ್ ಆಕ್ಟ್ 1957) ಪ್ರಾವಧಾನಗಳಿಗೆ ಒಳಪಟ್ಟಿದೆ. ಪ್ರತಿಯೊಂದೂ ಬಿಡಿ ಲೇಖನದ, ಅಧ್ಯಾಯದ ಅಥವಾ ಪುಸ್ತಕಭಾಗದ, ಧ್ವನಿಕಡತದ, ಚಿತ್ರದ, ಅಥವಾ ಚಲನಚಿತ್ರದ ಮಾಹಿತಿಗಳ ಹಕ್ಕುಗಳು ಆಯಾ ಲೇಖಕ, ಕಲಾವಿದ, ಛಾಯಾಗ್ರಾಹಕ ಅಥವಾ ಕಲಾವಿದರಿಗೆ ಸೇರಿವೆ.
ಕಣಜದಲ್ಲಿರುವ ಮಾಹಿತಿಗಳನ್ನು ಕಲಿಕೆಗಾಗಿ, ಬೇರೆ ಬೇರೆ ಅಧ್ಯಯನಗಳಲ್ಲಿ ಉಲ್ಲೇಖಿಸುವುದಕ್ಕಾಗಿ, ಸಂಶೋಧನಾ ಬರವಣಿಗೆಗಳಲ್ಲಿ ಉದ್ಧರಿಸಲು ಬಳಸುವವರು ಅಂಥ ಸಂದರ್ಭಗಳಲ್ಲಿ ಆಯಾ ಮಾಹಿತಿಗಳ ಕೃತಿಸ್ವಾಮ್ಯದಾರರನ್ನು ಸೂಕ್ತವಾಗಿ ಉಲ್ಲೇಖಿಸಬೇಕು." ಕಲಿಕೆ ಅಥವಾ ಅಧ್ಯಯನಕ್ಕೆ  ಕೃತಿ ಕಾರರ ಹೆಸರು ಉಲ್ಲೇಖಿಸಿ ಬಳಸಬಹುದು ಎಂದಿದೆ. ಆದರೆ ಪಠ್ಯ ಪುಸ್ತಕಗಳಲ್ಲಿ ಫೋಟೊ ಬಳಸುವುದು, ಲಾಭರಹಿತ ಯೋಜನೆಗಳಲ್ಲಿ ಕೃತಿಗಳನ್ನು ಬಳಸಲು ಅನುಮತಿಯಿದೆಯೇ ಎನ್ನುವುದು ಸ್ಪಷ್ಟವಿಲ್ಲ.   ಫೋಟೊಗಳನ್ನು ತಮ್ಮ ಜಾಲತಾಣದಲ್ಲಿ ಪ್ರಕಟಿಸುವುದಕ್ಕೆ ಮಾತ್ರ ಕಣಜ ಅನುಮತಿಯನ್ನು ಕೃತಿಕಾರರಿಂದ ಪಡೆದಿರುತ್ತದೆ. ಕ್ರಿಯೇಟಿವ್ ಕಾಮನ್ಸ್ ಲೈಸೆನ್ಸಿನಡಿ ವಿಕಿಮೀಡಿಯಾದಲ್ಲಿ ಪ್ರಕಟಿಸಿದ ಫೋಟೊಗಳನ್ನು ಮಾತ್ರ ವಿಕಿಪೀಡಿಯ ಪುಟಗಳಲ್ಲಿ ಕಾಣಬಹುದು. ಇವುಗಳನ್ನು ಕೃತಿಕಾರರ ಹೆಸರನ್ನು ನಮೂದಿಸುವ ಮೂಲಕ ಮರುಬಳಕೆ ಮಾಡಬಹುದು.ಇದರಿಂದ ಸಾರ್ವಜನಿಕ ಸಹಭಾಗಿತ್ವದಲ್ಲಿ ರೂಪುಗೊಂಡ  ಕೃತಿಯೊಂದು ಎಲ್ಲರಿಗೂ ತಲುಪಲಿಕ್ಕೆ ಸಾಧ್ಯವಾಗುತ್ತದೆ. ಕೃತಿಕಾರರಿಂದ ಅನುಮತಿ ಪಡೆಯುವ ಅವಶ್ಯಕತೆಯೂ ಇರುವುದಿಲ್ಲ. ಕಣಜ ತನ್ನಲ್ಲಿ ಶೇಖರವಾಗಿರುವ ಕನ್ನಡದ ಮಾಹಿತಿ ಸಂಪತ್ತನ್ನು ಕ್ರಿಯೇಟಿವ್ ಕಾಮನ್ಸ್ ಅಡಿಯಲ್ಲಿ ಪ್ರಕಟಿಸಿದರೆ ಅದರ ಉದ್ದೇಶ ಸಾಧನೆಗೆ ಹೆಚ್ಚಿನ ನೆರವಾಗಬಹುದು.

ಕಣಜ ತನ್ನದೇ ಆದ ವಿಶಿಷ್ಟತೆಗಳನ್ನೂ ಹೊಂದಿದೆ. ಸಾಮಾನ್ಯರಿಗೆ ದುರ್ಲಭವಾದ ಆಕರಗಳ ಮಾಹಿತಿಯನ್ನು ಅಂತರಜಾಲದಲ್ಲಿ ಒದಗಿಸುವ ಕೆಲಸ ಮಾಡುತ್ತಿದೆ. ಉದಾಹರಣೆಗೆ ರಾಷ್ಟ್ರಕವಿ ಜಿ.ಎಸ್. ಶಿವರುದ್ರಪ್ಪನವರ ಸಮಗ್ರ ಗದ್ಯವಿರುವ ಪುಟವನ್ನು ನೋಡಬಹುದು.  ಇಂತಹ ಕೆಲಸಗಳಿಗೆ ಹಕ್ಕು ಸ್ವಾಮ್ಯ ಸಮಸ್ಯೆ ನಿವಾರಣೆ, ಆಕರದ  ಸಂಪಾದನೆ, ಪರಿಶೀಲನೆ, ಪರಿಷ್ಕರಣೆ - ಈ ನಿಟ್ಟಿನಲ್ಲಿ ಕೆಲಸ ಮಾಡುವುದಕ್ಕೆ ತಜ್ಞರ ತಂಡವನ್ನು ಹೊಂದಿದೆ.  ವಿಕಿಪೀಡಿಯ ಜನಸಾಮಾನ್ಯರ ಸಹಭಾಗಿತ್ವದಲ್ಲಿ ರೂಪುಗೊಳ್ಳುವ ಸ್ವತಂತ್ರ ಹಾಗೂ ಮುಕ್ತ ವಿಶ್ವಕೋಶವಾಗಿದ್ದರೆ  ಕಣಜ ಕರ್ನಾಟಕ ಸರ್ಕಾರದ ಆಶ್ರಯದಲ್ಲಿ ಸಂಪಾದಕೀಯ ಮಂಡಳಿಯ ಮೇಲುಸ್ತುವಾರಿಯಲ್ಲಿ ರೂಪುಗೊಳ್ಳುತ್ತಿರುವ ಜ್ಞಾನಕೋಶ. ಎರಡು ಭಿನ್ನ ನೆಲೆಯಲ್ಲಿ ಕಾರ್ಯನಿರ್ವಹಿಸುತ್ತಿವೆ. ಇವುಗಳ ನಡುವಿನ ವ್ಯತ್ಯಾಸ ತಿಳಿದಿರಬೇಕಾದ್ದು ಅವಶ್ಯಕ.

Currently have 0 comments:


Leave a Reply